ಬಸವ ಜಯಂತಿ ಸಂಭ್ರಮ: ಶರಣರಾಗಿ ಮಿಂಚಿದ ಚಿಣ್ಣರು – ಕಲ್ಲದೇವನಹಳ್ಳಿಯಲ್ಲಿ ಸಂಸ್ಕೃತಿ ಹಬ್ಬ

ಹನ್ನೆರಡನೇ ಶತಮಾನದ ಶರಣ ಪರಂಪರೆಗೆ ಜೀವ ತುಂಬಿದ ವಿದ್ಯಾರ್ಥಿಗಳು | ಬಸವ ತತ್ವಗಳ ಜಾಗೃತಿ ಮೂಡಿಸಿದ ಶಾಲಾ ಕಾರ್ಯಕ್ರಮ.


ಯಾದಗಿರಿ ಜಿಲ್ಲೆ, ಕಲ್ಲದೇವನಹಳ್ಳಿ ಗ್ರಾಮದ ಶ್ರೀ ಖಾಸ್ಗತೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಅಪೂರ್ವ ರೀತಿಯಲ್ಲಿ ಆಚರಿಸಲಾಗಿದ್ದು, ಕಾರ್ಯಕ್ರಮವೇ ಒಂದು ಸಂಸ್ಕೃತಿ ಹಬ್ಬದ ರೂಪ ತಳೆದಿತು.
ಹನ್ನೆರಡನೇ ಶತಮಾನದ ಶರಣರ ಪರಂಪರೆಯನ್ನು ನೆನಪಿಸುವ ರೀತಿಯಲ್ಲಿ ಶಾಲೆಯ ಚಿಣ್ಣರು ಛದ್ಮಾ ವೇಷ ಧರಿಸಿ ಬಸವೇಶ್ವರ, ಅಕ್ಕಮಹಾದೇವಿ, ಅಲ್ಲಮಪ್ರಭು, ಚನ್ನಬಸವಣ್ಣ ಸೇರಿದಂತೆ ಹಲವಾರು ಶರಣರ ರೂಪದಲ್ಲಿ ಮಿಂಚಿದರು. ಮಕ್ಕಳ ವೇಷಭೂಷಣ, ಮಾತಿನ ಶೈಲಿ ಹಾಗೂ ಅಭಿನಯ ಕಾರ್ಯಕ್ರಮಕ್ಕೆ ಜೀವ ತುಂಬಿದವು. ವೇದಿಕೆ ಮೇಲೆ ಶರಣರ ಚಿಂತನೆಗಳು ಜೀವಂತವಾಗಿ ಮೂಡಿಬಂದ ದೃಶ್ಯ ಎಲ್ಲರ ಮನಸ್ಸನ್ನು ಕಟ್ಟಿ ಹಾಕಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಜಂಡ ಹಿರೇಮಠ ವಹಿಸಿ, ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಶ್ಲಾಘಿಸಿದರು.
ಮುಖ್ಯ ಗುರು ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ,
“ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳು ಕೇವಲ ಇತಿಹಾಸಕ್ಕೆ ಸೀಮಿತವಲ್ಲ; ಇಂದಿನ ಸಮಾಜದ ದಾರಿದೀಪವಾಗಿದೆ. ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಶರಣರ ಆದರ್ಶಗಳನ್ನು ಪರಿಚಯಿಸುವುದು ಅವರ ಭವಿಷ್ಯ ರೂಪಿಸುವ ಮಹತ್ವದ ಹೆಜ್ಜೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಈರಮ್ಮ ಹಿರೇಮಠ, ಪಾರ್ವತಿ ಬಿರಾದರ್, ಸಂಗೀತ, ಪಲ್ಲವಿ, ಗೀತಾ, ಗೌತಮಿ ಸೇರಿದಂತೆ ಸಿಬ್ಬಂದಿ ವರ್ಗದವರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಅವರ ಶ್ರಮ ಪ್ರಮುಖ ಕಾರಣವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಷಕರು ಹಾಗೂ ಗ್ರಾಮಸ್ಥರು ಮಕ್ಕಳ ಪ್ರತಿಭೆಯನ್ನು ಮೆಚ್ಚಿ, “ಇದು ಕೇವಲ ಉತ್ಸವವಲ್ಲ, ಸಂಸ್ಕೃತಿ ಪಾಠ” ಎಂದು ಅಭಿಪ್ರಾಯಪಟ್ಟರು. ಬಸವೇಶ್ವರರ ತತ್ವಗಳು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಈ ಪ್ರಯತ್ನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಒಟ್ಟಾರೆ, ಕಲ್ಲದೇವನಹಳ್ಳಿ ಶಾಲೆಯಲ್ಲಿ ನಡೆದ ಬಸವ ಜಯಂತಿ ಆಚರಣೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುವ ಉತ್ತಮ ಮಾದರಿಯಾಗಿ ಹೊರಹೊಮ್ಮಿತು.

Leave a Reply

Your email address will not be published. Required fields are marked *